ಕವನ: ರೈತ


ಓ ರೈತ, ನೀ ಅನ್ನದಾತ
ಅಂಜದಿರು, ಅಳುಕದಿರು
ಬರುವುದು ಒಳ್ಳೆಯ ಸಮಯ
ಮಾನವ ಕುಲಕ್ಕೆ ನೀನೇ ಒಡೆಯ 

ಕುಗ್ಗದಿರು ಬರುವ ಕಷ್ಟಗಳಿಗೆ
ಬದಲಾಗದಿರು ಲಾಭ ನಷ್ಟಗಳಿಗೆ
ಸ್ನೇಹಿತ ನೀನು ಮೂಕಪ್ರಾಣಿಗಳಿಗೆ 
ಚೊಚ್ಚಲ ಮಗನಾದೆ ಭೂತಾಯಿಗೆ

ಬಿಸಿಲ ಝಳಕ್ಕೆ ಬೀಳುವ ನಿನ್ನ
ಬೆವರ ಹನಿ ರಕ್ತಕ್ಕೆ ಸಮ
ಮಳೆಯಲ್ಲಿ ಮಿಂದು, ಚಳಿಯಲ್ಲಿ ನಡುಗಿ
ಬೆಳೆಯ ಬೆಳೆಯುವೆ, ನಿನಗೆ ಯಾರು ಸಮ

ಸಾಗುತ್ತಿಹುದು ನಿನ್ನಯ ಬದುಕು
ನೀರಿನ ಮೇಲಿನ ಗುಳ್ಳೆಯಂತೆ
ಅಮರವಾಗಲಿ ನಿನ್ನಯ ಹೆಸರು
ಬಾನಿನಲ್ಲಿರುವ ಧ್ರುವತಾರೆಯಂತೆ 

ಜೋಡೆತ್ತುಗಳ ಜೊತೆ ನೊಗ
ನೇಗಿಲು ಹಿಡಿದ ನಿನಗೆ ನನ್ನ ನಮನ
ನಿನ್ನ ನಿಸ್ವಾರ್ಥ ಕಾಯಕಕ್ಕೆ ಅರ್ಪಣೆ
ನನ್ನ ಈ ಪುಟ್ಟ ಕವನ

    ಯತೀಶ್ವರ ಆರ್ ಗಂಗವಾಡಿ

ಭಕ್ತಿ ಗೀತೆ


        ವೀರಸೋಮೇಶ್ವರ ಸ್ವಯಂಬುಶ್ರೀ
        ಶ್ರೀಮದ್ ಜಗದ್ಗುರು ರಂಭಾಪುರಿ 

      ಶ್ರೀಪಿಠ ಪರಂಪರೆಯ ಶರನ್ನವರಾತ್ರಿ 
      ಆಚರಿಸಿ ತುಂಬಿಹಿರು ಭಕ್ತಿಯ ಸ್ಪೂರ್ತಿ 

        ಸಾಹಿತ್ಯ ಸಂಗೀತ ಕಲೆಗಳ ಕ್ರಾಂತಿ 
     ಎಬ್ಬಿಸಿ ನೀಡಿಹರು ಮನಗಳಿಗೆ ಶಾಂತಿ

    ಸಾತ್ವಿಕ ಸತ್ವಶೀಲ ಸಮಾಜವು ನಿರ್ಮಿಸಿ 
    ಬರುವ ಭಕ್ತಸಮೂಹಕ್ಕೆ ಹರಸಿ ಹಾರೈಸಿ 

     ಭವದಲ್ಲಿ ಭಕ್ತಿಯ ಮಂತ್ರವನ್ನು ಸಾರಿ 
    ಮಾಡಿರುವರು ಸುಕ್ಷೇತ್ರ ಶ್ರೀ ರಂಭಾಪುರಿ 

    ಶಾಂತಿಯ ನೆಲೆಬೀಡು ಬಾಳೆಹೊನ್ನೂರು 
    ಅಧ್ಯಾತ್ಮದ ಅರಿವು ಬಿತ್ತಿರಲು ಶ್ರೀ ಗುರು 

 ಸದಾ ಭಕ್ತರನ್ನು ಕಾಯುವ ಸಾಕಾರಮೂರ್ತಿ 
   ಜಗದಗಲ ಹರಡಿಹುದು ನಿಮ್ಮಯ ಕೀರ್ತಿ 

ಮಹಿಮೆಯು ಕೇಳಿರಲು ಆ ಸೂರ್ಯ 
ಚಂದ್ರರು ನೋಡಿ ಕಣ್ತುಂಬಿಕೊಳ್ಳಲು 
ಧರೆಗಿಳಿದು ಬಂದರು 

   ಅರಿಯದಾದೇನು ಗುರುವೇ ನಿಮ್ಮಯ ಶಕ್ತಿ   
   ಕರಮುಗಿದು ಕೇಳುವೆನು, ನೀಡಯ್ಯ ಮುಕ್ತಿ 

ಸಿದ್ಧರಾಮ ಸಿ ಸರಸಂಬಿ ಕಾರಭೋಸಗಾ 
ತಾ!! ಅಫಜಲಪುರ ಜಿ!! ಕಲಬುರ್ಗಿ✍️*